Wednesday, August 28, 2013

ಕೃಷ್ಣಾ! ನೀ ಮತ್ತೆ ಹುಟ್ಟಿ ಬರುವುದಾದರೆ ....

ಕೃಷ್ಣಾ! ನೀ ಮತ್ತೆ ಹುಟ್ಟಿ ಬರುವುದಾದರೆ .... 

ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

Composed on the occasion of Krishna Janma AshTami August 28, 2013

ಹುಟ್ಟು ಬಾರೋ, ಸುಂದರ ಅವತಾರಿ ನೀನಿರಬಹುದು
ಪುಟ್ಟ ಕಂದನಾಗಿ ಸಾಕು ಮನೆ ಮನೆಗಳಲಿ ನೀ ಬಂದು

ದೇವಕಿಗೆ ತಂದೆ ಭಾಗ್ಯ, ಯಶೋಧೆಗೆ ಅಪಾರ ಆನಂದ
ದೇವ ಲೋಕದ ಸುನಾದದಿ ಕೊಳಲ ಗಾನದ ಗೋವಿಂದ

ಕನ್ಯೆಯರ ಕುಣಿಸಿದೆ ವೇಣುಗಾನದ ಸಂವೇದದ ಲಯಕೆ
ಅನ್ಯ ಸುಂದರಿಯರ ತನು ಮನಕೂ ಏರಿಸಿದೆ ಲವಲವಿಕೆ

ರಾಧೆಗೆ ಪ್ರೇಮ ಪೂರೈಸಿ, ರುಕ್ಮಿಣಿಗೆ ಹಾರ ಹಾಕಿದೆಯಲ್ಲಾ
ಮಧುಸೂಧನ ಆದೆ, ಮಧುರತೆಯ ಸಿಂಚನ ಭಕ್ತರಿಗೆಲ್ಲಾ

ಪಾಂಡವರ ಪಕ್ಷಪಾತಿ ನೀನಾಗಿದ್ದು, ಅಭಯ ದ್ರೌಪದಿಗೆ
ಗಾಂಡೀವಿಯನು ಗೆಲಿಸಿದೆ ಭಾರತ ಸಮರದಿ ಸಖನಾಗಿ

ಭಗವದ್ಗೀತೆ ನರನಿಗೆ; ಅದೇ ಉಪದೇಶ ನರ ಕುಲಕೆಲ್ಲಾ
ಯೋಗಿ ವ್ಯಾಸರ ನಾಲಗೆಯಲ್ಲಿ ಕುಣಿದು ಹಾಡಿದೆಯಲ್ಲಾ

ಮತ್ತೆ ಬರುವಾಗ, ಬರಬೇಕು ನಂದನ ಭಾರತದಲೆಲ್ಲಾ
ಹೆತ್ತ ಅಮ್ಮಂದಿರಿಗೆಲ್ಲಾ ಬಲು ತುಂಟಾಟ ಆಡಬೇಕಲ್ಲಾ

ಅಕ್ಕ ತಂಗಿಯರಿಗೆ ಅಭಯ ಮಾತ್ರ ನೀಡಲೇ ಬೇಕಪ್ಪಾ
ರೊಕ್ಕದ ರಾಣಿ ಲಕುಮಿಯು ಕೈ ಧನ ಸುರಿಯ ಹೇಳಪ್ಪಾ

ಪಾಂಡವರೂ ಬೇಡ; ಕೌರವರಂತೂ ಬೇಡವೇ ಬೇಡಲೋ
ಪುಂಡರ ಕಾಟ, ದಾಳಗಳ ಆಟ, ಹುಚ್ಚು ವನವಾಸವೆಲ್ಲಾ

ನೀರೆಯರ ಸೀರೆಗಳು ಸರಿಸೆರಗು ಭಾರತಿಯ ಮಗಳಿಗೆ
ಕರುನಾಡಿಗೆ ಕರುಣಿಸು ನಂದನ ವನದ ಆನಂದದ ಪೀಳಿಗೆ

ದ್ವಾಪಾರವೂ ಬೇಡ; ಬೇಡ ಅವತಾರ ಎತ್ತಿ ಸಂಹಾರಗಳು
ಅಪ್ಪ ಅಪ್ಪಂದಿರಿಗೆ ಸಾಕು ಬೆಳೆಯುತಿರೆ ಚೆಲುವಂತ ಮಕ್ಕಳು

ಕೊಳಲು ಮಾತ್ರ ಮರೆಯ ಬೇಡ; ತುಳಸಿ ಬೇಕು ಅಂಗಳಕೆಲ್ಲ
ಕೊಲುವ ಚಕ್ರ ತರಲೇ ಬೇಡ; ನಿನ್ನ ನಗು ಮುಖ ಬೇಕೇ ಬೇಕಲ್ಲ

No comments:

Post a Comment